ವಿಶ್ವ ಪ್ರವಾಸೋದ್ಯಮ ದಿನಾಚರಣೆ
ಆವತಿ ಬೆಟ್ಟ ಅಭಿವೃದ್ಧಿಗೆ ಐದು ಕೋಟಿ ರೂಗಳ ಡಿಪಿಆರ್ ಸಲ್ಲಿಕೆ: ಡಿಸಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಆವತಿ ಬೆಟ್ಟ ಅಭಿವೃದ್ಧಿಗೆ ಐದು ಕೋಟಿ ಮೊತ್ತದ ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ ಕೆ.ಎನ್ ಅನುರಾಧ ತಿಳಿಸಿದರು.

ದೇವನಹಳ್ಳಿಯ ಆವತಿ ಬೆಟ್ಟದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಚಾರಣ, ಸಸಿ ನೆಡುವ , ಸ್ವಚ್ಚತಾ ಆಂದೋಲನ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಆವತಿ ಬೆಟ್ಟ ಪ್ರವಾಸಿಗರ ಪ್ರಮುಖ ಆಕರ್ಷಣೆಯ ಸ್ಥಳವಾಗಿ ಮಾರ್ಪಟ್ಟಿದೆ. ದೂರದ ಊರುಗಳಿಂದ ಸಾಕಷ್ಟು ಪ್ರವಾಸಿಗರು ಬಂದು ಹೋಗುವರು. ಆವತಿ ಬೆಟ್ಟ ಸಂಪೂರ್ಣ ಅಭಿವೃದ್ಧಿಗೆ ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಲಾಗಿದೆ ಎಂದರು.


ಸ್ವಚ್ಚತಾ ಹೀ ಸೇವಾ ಆಂದೋಲನ ಜಿಲ್ಲೆಯಾದ್ಯಂತ ಆರಂಭವಾಗಿದ್ದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಸದ ರಾಶಿ(ಬ್ಲಾಕ್ ಸ್ಟಾಪ್) ಸ್ಥಳಗಳನ್ನು ಗುರುತಿಸಿ ಹಂತ ಹಂತವಾಗಿ ಸ್ವಚ್ಛತೆ ಮಾಡಲಾಗುತ್ತಿದೆ. ಪೌರಕಾರ್ಮಿಕರು, ಗ್ರಾಮ ಸ್ವಚ್ಚತಾ ಗಾರರು ಎಲ್ಲೆಲ್ಲಿ ಸ್ವಚ್ಚತೆ ಮಾಡಿರುತ್ತಾರೆ ಮತ್ತೆ ಅಲ್ಲಿ ಬಂದು ಸಾರ್ವಜನಿಕರು ಕಸ ಸುರಿಯುತ್ತಿದ್ದಾರೆ. ಈ ರೀತಿ ಮರುಕಳಿಸದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಸ್ವಚ್ಚತಾ ಹೀ ಸೇವಾ ಆಚರಣೆಯು ಕೇವಲ ಅಧಿಕಾರಿಗಳು, ಸರ್ಕಾರದಿಂದ ಸಾಧ್ಯ ಆಗಲ್ಲ ಸಾರ್ವಜನಿಕರು ಕೈ ಜೋಡಿಸಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ನಶಾ ಮುಕ್ತ ಭಾರತ ನಿರ್ಮಾಣ ನಮ್ಮ ಗುರಿಯನ್ನಾಗಿಸಿ ನಶಾ ಮುಕ್ತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಹಿಂದೆ ಆವತಿ ಬೆಟ್ಟಕ್ಕೆ ಬರುವ ಪ್ರವಾಸಿಗರು ಡ್ರಗ್ಸ್ ಸೇವನೆ ಮಾಡುವರು ಎಂದು ದೂರುಗಳು ಬಂದಿತ್ತು ಅದನ್ನು ಎಸ್ಪಿ ಅವರ ಗಮನಕ್ಕೆ ತರಲಾಗಿತ್ತು. ತದನಂತರ ಕಾರ್ಯಾಚರಣೆ ನಡೆಸಿ ಡ್ರಗ್ಸ್ ವಶಪಡಿಸಿಕೊಂಡು, ಅವರ ಮೇಲೆ ಕ್ರಮ ಜರುಗಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಶಾ ಮುಕ್ತ ಭಾರತ ಪ್ರತಿಜ್ಞಾ ವಿಧಿ ಬೋಧನೆ, ಪೌರಕಾರ್ಮಿಕರಿಗೆ ಸ್ವಚ್ಚತಾ ಪರಿಕರಗಳನ್ನು ವಿತರಿಸಿ, ಆರೋಗ್ಯ ತಪಾಸಣೆ ನಡೆಸಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿತಾ, ಡಿವೈಎಸ್ಪಿ ಪಾಂಡುರಂಗ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಪ್ರೀತಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳು, ಪ್ರವಾಸಿಗರು ಉಪಸ್ಥಿತರಿದ್ದರು.

