ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆ ಸ್ಥಳಗಳಿಗೆ ಸಿಇಒ ದಿಢೀರ್ ಭೇಟಿ

ಅಕ್ರಮ ಕ್ಯಾಟ್ ಫಿಶ್ ಸಾಕಾಣಿಕೆ ವ್ಯಕ್ತಿಗಳ ವಿರುದ್ಧ ಕೇಸ್ ದಾಖಲಿಸಲು ಸೂಚನೆ

ಸ್ಥಳದಲ್ಲೇ ಕ್ಯಾಟ್ ಫಿಶ್, ಹೊಂಡಗಳ ನಾಶ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಕ್ಯಾಟ್‌ ಫಿಶ್‌ ಸಾಕಣೆ ಮಾಡುತ್ತಿದ್ದ ಹೊಂಡಗಳ ಮೇಲೆ ಇಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ವಾಸಂತಿ ಅಮರ್ ರವರ ನೇತೃತ್ವದಲ್ಲಿ ಧಿಡೀರ್ ದಾಳಿ ನಡೆಸಿ ಹೊಂಡಗಳನ್ನು ನಾಶ ಪಡಿಸಲಾಗಿದೆ.

ಹೋಬಳಿಯಲ್ಲಿ ಹಲವೆಡೆ ಅಕ್ರಮವಾಗಿ ಕ್ಯಾಟ್‌ಫಿಶ್‌ಗಳನ್ನು ಸಾಕಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಮೀನುಗಾರಿಕೆ ಮತ್ತು ಪೋಲಿಸ್‌ ಇಲಾಖೆ ಸಹಕಾರದೊಂದಿಗೆ ನಾಲ್ಕು ಕಡೆ ದಾಳಿ ನಡೆಸಲಾಗಿದೆ.

ಸೂಲಿಬೆಲೆ ಹೋಬಳಿಯ ಸೂಲಿಬೆಲೆ ಮತ್ತು ಗಿಡ್ಡಪನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಕ್ಯಾಟ್‌ ಫಿಶ್‌ ಸಾಕಣೆ ಮಾಡುತ್ತಿದ್ದು ಹೊರ ರಾಜ್ಯಗಳಿಗೆ ಮಾರಾಟ ಮಾಡುವುದನ್ನು ತಡೆದು ದಾಳಿ ಮಾಡಿ ಹೊಂಡಗಳನ್ನು ಸ್ಥಳದಲ್ಲೇ ನಾಶ ಪಡಿಸಲಾಗಿದೆ.

ಜೆಸಿಬಿ ಯಂತ್ರಗಳನ್ನು ಬಳಸಿ ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆಯ 20 ಹೊಂಡಗಳನ್ನು ನಾಶ ಮಾಡಲಾಗಿದೆ. ಜೊತೆಗೆ ನಂದಗುಡಿ ಹೋಬಳಿಯ ನಾನಾ ಕಡೆ ಅಕ್ರಮವಾಗಿ ಹೊಂಡಗಳನ್ನು ನಿರ್ಮಿಸಿ ಅದರಲ್ಲಿ ಕ್ಯಾಟ್‌ಫಿಶ್‌ ಸಾಕಾಣಿಕೆ ಮಾಡುತ್ತಿದ್ದ ಕೇಂದ್ರಗಳ ಮೇಲೆ ಜಂಟಿಯಾಗಿ ದಾಳಿ ನಡೆಸಿದ ಅಧಿಕಾರಿಗಳು ಮೀನು ಸಾಕಾಣಿಕೆದಾರರ ಬೆದರಿಕೆ, ತಂತ್ರಗಳಿಗೆ ಜಗ್ಗದೇ ಹೊಂಡಗಳನ್ನು ನಾಶ ಮಾಡಿದ್ದಾರೆ.

ನಾನಾ ಕಡೆ ಅಕ್ರಮವಾಗಿ ಕ್ಯಾಟ್‌ಫಿಶ್‌ಗಳನ್ನು ಸಾಕಾಣಿಕೆ ಮಾಡಿ ಪರಿಸರಕ್ಕೆ ಹಾನಿಯುಂಟು ಮಾಡಲಾಗುತ್ತದೆ, ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇರುವುದರಿಂದ ವಿಮಾನ ಹಾರಾಟಕ್ಕೆ ಪಕ್ಷಿಗಳ ಹಾರಾಟವು ಹೆಚ್ಚಾಗಿರುವ ಕಾರಣ ವಿಮಾನ ನಿಲ್ದಾಣ ಅಧಿಕಾರಿಗಳಿಂದ ದೂರು ಬಂದಿತ್ತು.

ಮೀನು ಸಹಿತ ನಾಶ ಕಾರ್ಯಚರಣೆಗೆ ಬಂದಾಗ ಸಾಕಾಣಿಕೆದಾರರಿಗೆ ನಮ್ಮ ಒಳ್ಳೆತನವನ್ನೆ ದೌರ್ಬಲ್ಯವೆಂದು ತಿಳಿದು ಮತ್ತದೇ ದಂಧೆಗೆ ಇಳಿದಿದ್ದಾರೆ, ಇದಕ್ಕೊಂದು ಅಂತ್ಯ ಹಾಡಬೇಕು ಎಂಬ ಉದ್ದೇಶದಿಂದಲೇ ಕಠಿಣ ನಿಲುವು ತಳೆದು ಹೊಂಡಗಳನ್ನು ಮೀನು ಸಹಿತ ಸಂಪೂರ್ಣ ನಾಶಪಡಿಸಿದ್ದೇವೆ ಅವರ ಯಾವುದೇ ಬೆದರಿಕೆ ತಂತ್ರಗಳಿಗೆ ಮಣಿದಿಲ್ಲ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ವಾಸಂತಿ ಅಮರ್ ತಿಳಿಸಿದರು.

ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ಎಫ್ಐಆರ್ ದಾಖಲಿಸಲು ಪೋಲಿಸ್ ಇಲಾಖೆಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಶೀತಲ್, ಕಾರ್ಯನಿರ್ವಾಹಕ ಅಧಿಕಾರಿ ಮುನಿಯಪ್ಪ, ಪೊಲೀಸ್ ಇಲಾಖೆ ಅಧಿಕಾರಿಗಳು, ಮೀನುಗಾರಿಕೆ ಅಧಿಕಾರಿಗಳು ಗ್ರಾಮ ಪಂಚಾಯತಿ ಸಿಬ್ಬಂದಿ, ಜಿಲ್ಲಾ ಪಂಚಾಯತಿ ಸಿಬ್ಬಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author