ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ಸೋಲೂರು ಹೋಬಳಿಯಲ್ಲಿ ತಾಲ್ಲೂಕು ಮಟ್ಟದ ಪ್ರಜಾ ಸೇವಾ ಆಂದೋಲನ ಸಭೆ

ಶಾಸಕ ಶ್ರೀನಿವಾಸ್ ರಿಂದ ಅಹವಾಲು ಸ್ವೀಕಾರ

ಸೋಲೂರು ಹೋಬಳಿಯ ಸಮಗ್ರ ಅಭಿವೃದ್ಧಿಗೆ ಕ್ರಮ:ಶಾಸಕ ಶ್ರೀನಿವಾಸ್

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕು ಸೋಲೂರು ಹೋಬಳಿಯನ್ನು ಮಾಗಡಿ ತಾಲ್ಲೂಕಿನಿಂದ ನೆಲಮಂಗಲ ತಾಲ್ಲೂಕಿಗೆ ಸೇರ್ಪಡೆಗೊಳಿಸುವುದು ಬಹು ವರ್ಷಗಳ ಬೇಡಿಕೆ, ಅದನ್ನು ಈಗ ಸಾಕಾರಗೊಳಿಸಲಾಗಿದ್ದು ಸೋಲೂರು ಹೋಬಳಿಯ ಸಮಗ್ರ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ನೆಲಮಂಗಲ ಶಾಸಕರಾದ ಶ್ರೀನಿವಾಸ್ ಹೇಳಿದರು.

ತಾಲ್ಲೂಕಿನ ಸೋಲೂರು ಹೋಬಳಿಯ ಕೆ.ಎನ್.ಎಸ್ ಕನ್ವೆಂಷನ್ ಹಾಲ್ ನಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರಜಾ ಸೇವಾ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಸಾರ್ವಜನಿಕರ ಅಹವಾಲು ಆಲಿಸಿದರು.

ಬಳಿಕ ಮಾತನಾಡಿದ ಅವರು ಹಿಂದಿನ ವಿಧಾನಸಭಾ ಚುನಾವಣೆಗಳಲ್ಲಿ ಸೋಲೂರು ಹೋಬಳಿ ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತಿತ್ತು, ಆಡಳಿತ ಮಾಗಡಿ ತಾಲ್ಲೂಕಿಗೆ ಸೇರಿತ್ತು. ಇದರಿಂದ ಸೋಲೂರಿನ ಜನರ ಸಮಸ್ಯೆಗಳು ಬಗೆಹರಿಸಲು ಸಾಧ್ಯವಾಗುತ್ತಿರಲಿಲ್ಲ. ಸೋಲೂರನ್ನು ನೆಲಮಂಗಲಕ್ಕೆ ಸೇರ್ಪಡೆಗೊಳಿಸುವುದು ಸುಮಾರು 47 ವರ್ಷಗಳ ಬೇಡಿಕೆ. ಕೊನೆಗೂ ಸಾಕಾರಗೊಂಡಿದ್ದು ಸೋಲೂರು ನೆಲಮಂಗಲಕ್ಕೆ ಅಧಿಕೃತವಾಗಿ ಸೇರ್ಪಡೆ ಆಗಿದೆ ಎಂದರು.

ಸೋಲೂರು ಹೋಬಳಿಗೆ ಸಂಬಂಧಿಸಿದಂತೆ ಸುಮಾರು 17 ಇಲಾಖೆಗಳ ತಂತ್ರಾಂಶವನ್ನು ನವೀಕರಿಸಲಾಗಿದೆ. ಉಳಿದ ಇಲಾಖೆಗಳ ತಂತ್ರಾಂಶವು ನವೀಕರಣಗೊಳ್ಳುತ್ತಿದ್ದು ಸೋಲೂರು ಹೋಬಳಿಯ ಜನತೆಗೆ ಸರ್ಕಾರದಿಂದ ಸಿಗುವ ಎಲ್ಲಾ ರೀತಿಯ ಸೌಲಭ್ಯ ಸಿಗುವಂತೆ ತ್ವರಿತ ಕ್ರಮ ವಹಿಸಲಾಗುತ್ತಿದೆ ಎಂದರು.

ಪ್ರಜಾ ಸೇವಾ ಆಂದೋಲನದ ಭಾಗವಾಗಿ ಸೋಲೂರು ಹೋಬಳಿಯಲ್ಲಿ ಮೊದಲ ಸಭೆ ಆಯೋಜಿಸಿದ್ದೇವೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಖುದ್ದು ಸೋಲೂರು ಜನತೆಯ ಸಮಸ್ಯೆಗಳನ್ನು ಆಲಿಸಲು ಬಂದಿದ್ದಾರೆ. ಕಾನೂನು ವ್ಯಾಪ್ತಿಯಲ್ಲಿ ಬರುವ ಅರ್ಜಿಗಳಿಗೆ ತ್ವರಿತವಾಗಿ ಪರಿಹಾರ ಒದಗಿಸಲಾಗುವುದು. ತಾಲ್ಲೂಕು ಕಚೇರಿ, ಕಸಬಾ ಹೋಬಳಿ, ಸೋಲೂರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನ ಸಂಪರ್ಕ ಸಭೆ ಆಯೋಜಿಸಲಾಗುವುದು ಅಲ್ಲಿಯೂ ಬಂದು ಸಾರ್ವಜನಿಕರು ಅರ್ಜಿ ಸಲ್ಲಿಸಬಹುದು ಎಂದರು.

ತಾಲ್ಲೂಕಿನಾದ್ಯಂತ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ 6 ತಿಂಗಳ ಒಳಗಾಗಿ 10,000 ನಿವೇಶನ ಸಿದ್ದಪಡಿಸಿ ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ. ಸೋಲೂರು ಹೋಬಳಿ ಒಂದರಲ್ಲೇ 100 ಎಕರೆ ಜಾಗ ಗುರುತಿಸಿ ನಿವೇಶನ ಅಭಿವೃದ್ಧಿಪಡಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಮಾತನಾಡಿ ಮಾನ್ಯ ಮುಖ್ಯಮಂತ್ರಿಗಳ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಜಾ ಸೇವಾ ಆಂದೋಲನ ಪ್ರತಿ ಶನಿವಾರ ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ ನಡೆಯಲಿದೆ. ಜನರ ಬಳಿಗೆ ಅಧಿಕಾರಿಗಳು ನೇರವಾಗಿ ತೆರಳಿ ಅವರ ಸಮಸ್ಯೆ, ಅಹವಾಲು ಆಲಿಸಿ ತ್ವರಿತ ಪರಿಹಾರ ಒದಗಿಸಿದ್ದಾರೆ. ಜನರು ಪ್ರಜಾ ಸೇವಾ ಆಂದೋಲನ ಸಭೆಗಳಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸಿ ಸಕಾಲದಲ್ಲಿ ಪರಿಹಾರ ಪಡೆಯಿರಿ ಎಂದರು. ಕಾನೂನು ಅಡಿಯಲ್ಲಿ ಬರುವ ಅರ್ಜಿಗಳಿಗೆ 21 ದಿನದಲ್ಲಿ ಪರಿಹಾರ, ಉಳಿದ ಅರ್ಜಿಗಳನ್ನು ಐಪಿಜಿಆರ್ಎಸ್ ಪೋರ್ಟಲ್ ಮೂಲಕ ನಮೂದಿಸಿ ಸ್ವೀಕೃತಿ ಸಂಖ್ಯೆ ಅರ್ಜಿ ದಾರರಿಗೆ ನೀಡಿ ಸಕಾಲದಲ್ಲಿ ವಿಲೇವಾರಿ ಮಾಡಲು ಕ್ರಮ ವಹಿಸಲಾಗುವುದು ಎಂದರು.

ಸೋಲೂರು ಹೋಬಳಿಯನ್ನು ನೆಲಮಂಗಲ ತಾಲ್ಲೂಕಿಗೆ ಸೇರ್ಪಡೆ ಮಾಡಲಾಗಿದೆ. ಸೋಲೂರು ಹೋಬಳಿಯ 6 ಗ್ರಾಮ ಪಂಚಾಯಿತಿಯ 68 ಕಂದಾಯ ಗ್ರಾಮಗಳನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡಲಾಗಿದೆ. ಕಂದಾಯ, ಪಂಚಾಯತ್ ರಾಜ್,ಕೋರ್ಟ್ ತಂತ್ರಾಂಶಗಳನ್ನು ನವೀಕರಿಸಿ ಸೋಲೂರು ಹೋಬಳಿಯನ್ನು ತಂತ್ರಾಂಶದಲ್ಲಿ ಸೇರಿಸಲಾಗಿದೆ. ಸೋಲೂರಿನ ಜನರ ಸಮಸ್ಯೆ, ಅಹವಾಲು ಆಲಿಸಲು ಜಿಲ್ಲಾಡಳಿತ ಸದಾ ಸಿದ್ಧವಾಗಿದ್ದು ಸೋಲೂರು ಹೋಬಳಿ ಜನತೆಗೆ ಸರ್ಕಾರದ ಎಲ್ಲಾ ಸೌಲಭ್ಯ ಒದಗಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಿಇಒ ಡಾ. ವಾಸಂತಿ ಅಮರ್, ಎಸಿ ಮಂಜುನಾಥ್, ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್, ತಹಶೀಲ್ದಾರ್ ಮಲ್ಲೇಶ್, ಇಒ ಬಿಂದು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

About The Author